ಬಿಜೆಪಿ ಪಾಳೆಯದಿಂದ ಹೊಸ ಗಾಳಿಪಟ ಹಾರಾಡಲು ಆರಂಭಿಸಿದೆ. ಕೇಂದ್ರ ಸರಕಾರದಲ್ಲಿ ರಾಜ್ಯ ಸಚಿವರಾಗಿರುವ ಅನಂತಕುಮಾರ್ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸುದ್ದಿ ಸೂತ್ರ ಹಾಗೂ ಬಾಲಂಗೋಚಿ ಎರಡೂ ಇಲ್ಲದೆ ಹಾರಾಡುತ್ತಿದೆ. ಪಕ್ಷದ ಮೂಲಗಳೇನೋ ಇದು ಕೂಡ ತಂತ್ರಗಾರಿಕೆಯ ಭಾಗ ಎನ್ನುತ್ತಿವೆ. ಏನದು ತಂತ್ರಗಾರಿಕೆ ಅಂದರೆ, ಕರ್ನಾಟಕದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಅಂತ ಕಟ್ಟಿ, ಯಾವ ಪಕ್ಷವನ್ನು ಕೆಡವಿದ್ದರೋ ಅದನ್ನು ಅವರಿಂದಲೇ ಕಟ್ಟಿಸಿ, ಆ ನಂತರ ಅವರನ್ನು ದೂರ ಮಾಡುವುದು ಸದ್ಯದ ದೂರಾಲೋಚನೆ ಎನ್ನುತ್ತಾರೆ.ಈ ಮಧ್ಯೆ ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೂಡ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿದ್ದು, ಮುಂಚಿನಷ್ಟು ಚಟುವಟಿಕೆಯಿಂದ ಇಲ್ಲ. ಅದೇ ಕಾರಣಕ್ಕೆ ಮಂಗಳೂರು ಚಲೋನಲ್ಲೂ ಅವರು ತುಂಬ ಉತ್ಸಾಹದಿಂದೇನೂ ಪಾಲ್ಗೊಂಡಿರಲಿಲ್ಲ.